ಚಾಲ್ರ್ಸ್ (ಪವಿತ್ರ ರೋಮನ್ ಚಕ್ರವರ್ತಿಗಳು)

ಚಾಲ್ರ್ಸ್ I : ಪವಿತ್ರ ರೋಮನ್ ಸಾಮ್ರಾಜ್ಯದ ಮೊದಲನೆಯ ಚಕ್ರವರ್ತಿ. 

ಚಾಲ್ರ್ಸ್ II : ಷಾರ್ಲಮೇನ್ ಸ್ಥಾಪಿಸಿದ ಪವಿತ್ರ ರೋಮನ್ ಸಾಮ್ರಾಜ್ಯ ಒಡೆದಾಗ ಪಶ್ಚಿಮ ಫ್ರಾಂಕಿಷ್ ರಾಜ್ಯದ ರಾಜನಾಗಿ (843-77), ತನ್ನ ಆಡಳಿತದ ಕೊನೆಯ ಕಾಲದಲ್ಲಿ ಪವಿತ್ರ ರೋಮನ್ ಸಾಮ್ರಾಜ್ಯದ ಚಕ್ರವರ್ತಿಯಾಗಿದ್ದವ (875-77). ಚಾಲ್ರ್ಸ್‍ದ ಬಾಲ್ಡ್ (ಬೋಳ ಚಾಲ್ರ್ಸ್) ಎಂದು ಪರಿಚಿತ. ಷಾರ್ಲಮೇನನ ಮಗ 1ನೆಯ ಲೂಯಿಗೆ ಅವರ ಎರಡನೆಯ ಹೆಂಡತಿ ಗುಡಿತಳಲ್ಲಿ ಹುಟ್ಟಿದ (823). ಈತನಿಗೆ ತಂದೆಯ ರಾಜ್ಯದಲ್ಲಿ ಪಾಲು ನೀಡುವ ವಿಚಾರದಲ್ಲಿ ಸೋದರರಲ್ಲಿ ಅಂತಃಕಲಹವಾಗಿ ಕೊನೆಗೆ ಪೆರ್ಡನ್ ಒಪ್ಪಂದದಂತೆ (843) ಈತ ಪಶ್ಚಿಮ ಫ್ರಾಂಕಿಷ್ ರಾಜ್ಯದ ದೊರೆಯಾದ. 864ರ ವರೆಗೆ ನಾನಾ ಬಗೆಯ ವಿರೋಧಗಳನ್ನು ಎದುರಿಸಿದ. ಬ್ರಿಟಿಷ್ ಪಂಗಡದವರ ಬಂಡಾಯ, ನಾರ್ಮನ್ ವೈಕಿಂಗ್‍ಗಳ ಸತತ ದಾಳಿ-ಇವು ಪ್ರಮುಖ ಸಂಕಟಗಳು. ಅಕ್ವಿಟೇನ್ ರಾಜ್ಯವನ್ನು ವೈಕಿಂಗ್‍ಗಳ ದಾಳಿಯಿಂದ ರಕ್ಷಿಸಿ ಆ ರಾಜ್ಯಕ್ಕೆ ತನ್ನ ಮಗ ಚಾಲ್ರ್ಸನನ್ನು ರಾಜನಾಗಿ ಮಾಡಿದ (855). 856ರ ಅನಂತರ ಅವನ ಕೈಕೆಳಗಿನ ಶ್ರೀಮಂತರೇ ಬಂಡಾಯ ಹೂಡಿದರು. ಅವರನ್ನು ಈತ ಯಶಸ್ವಿಯಾಗಿ ಎದುರಿಸಿದ. ಚರ್ಚ್ ಪೂರ್ತಿಯಾಗಿ ಈತನಿಗೆ ಬೆಂಬಲ ನೀಡಿತು. ಇವನ ಕಾಲದಲ್ಲಿ ಚರ್ಚು ಹಳೆಯ ಹಸ್ತಪ್ರತಿಗಳ ಪುನಃಪ್ರತಿ, ಶಾಲೆಗಳ ವಿಸ್ತರಣೆ, ಧರ್ಮಗ್ರಂಥಗಳ ಗಾಢ ಅಭ್ಯಾಸ ಮುಂತಾದ ವಿಶೇಷ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ತೊಡಗಿತ್ತು. 875ರಲ್ಲಿ ಸಾಮ್ರಾಟ 2ನೆಯ ಲೂಯಿ ತೀರಿಕೊಂಡಾಗ ಪೋಪ್ 8ನೆಯ ಜಾನ್ ಈತನಿಗೆ ಸಾಮ್ರಾಟ ಪದವಿ ನೀಡಿ ಕಿರೀಟಧಾರಣೆ ಮಾಡಿಸಿದ. ಇವನ ಅನಂತರ ಇವನ ಮಗ 2ನೆಯ ಲೂಯಿಗೆ ಫ್ರಾಂಕಿಷ್ ರಾಜ್ಯದ ಪಟ್ಟವಾಯಿತು(879).

ಚಾಲ್ರ್ಸ್ III : ಚಾಲ್ರ್ಸ್‍ದ ಫ್ಯಾಟ್ (ಬೊಜ್ಜ ಚಾಲ್ರ್ಸ್) ಎಂದು ಪರಿಚಿತನಾದ ಈತ 881-88ರಲ್ಲಿ ಪವಿತ್ರ ರೋಮನ್ ಸಾಮ್ರಾಜ್ಯದ ಚಕ್ರವರ್ತಿಯಾಗಿದ್ದ. ಷಾರ್ಲಮೇನನ ಮೊಮ್ಮಗ ಲೂಯಿದ ಜರ್ಮನನ ಮಗ (839). 876ರಿಂದ ಸ್ವಾಬಿಯದ ರಾಜನಾಗಿದ್ದು, 879ರಲ್ಲಿ ಇಟಲಿಯ ರಾಜನಾದ. 881ರಲ್ಲಿ ರೋಮಿನ ಸಮ್ರಾಟನೂ, 882ರಲ್ಲಿ ಪೂರ್ವ ಫ್ರ್ಯಾಂಕಿಷ್ ರಾಜ್ಯದ ಅರಸನೂ ಆಗಿ ಆಯ್ಕೆಗೊಂಡ ಈತನಿಗೆ ಪಶ್ಚಿಮ ಫ್ರಾಂಕಿಷ್ ರಾಜ್ಯದ ದೊರೆ ಕಾರ್ಲೊಮನ್ ತೀರಿಕೊಂಡಾಗ (884) ಷಾರ್ಲಮೇನನ ಇಡೀ ರಾಜ್ಯದ (ಬರ್ಗಂಡಿ ವಿನಾ) ಒಡೆತನ ಬಂತು. ವೈಕಿಂಗ್‍ಗಳ ದಾಳಿಯನ್ನು ಇವನು ಎದುರಿಸಲಾಗಲಿಲ್ಲ. ಹಣತೆತ್ತು ಅವರನ್ನು ಹಿಂದಕ್ಕೆ ಕಳಿಸಬೇಕಾಯಿತು. ಈತನಿಗೆ ಅಪಸ್ಮಾರ ರೋಗ ಇದ್ದುದರಿಂದ ರಾಜ್ಯವನ್ನು ರಕ್ಷಿಸುವ ಸಾಮಥ್ರ್ಯ ಇರಲಿಲ್ಲ. ಈ ಕಾರಣದಿಂದಾಗಿ ಸಾಮ್ರಾಜ್ಯದಲ್ಲಿ ಬಂಡಾಯಗಳು ಹೆಚ್ಚಿದುವು. ಅದು ಒಡೆದುಹೋಯಿತು.

ಚಾಲ್ರ್ಸ್ IV : 1316-1378. ಪವಿತ್ರ ರೋಮನ್ ಸಾಮ್ರಾಟ ಹಾಗೂ ಬೊಹೀಮಿಯದ ದೊರೆ. ಬೋಹೀಮಿಯದ ದೊರೆ ಜಾನ್ ಆಫ್ ಲಕ್ಸೆಂಬರ್ಗನ ಮಗ, ಮೊದಲು ಇವನಿಗೆ ವೆನ್ಸೆಸ್ಲಸ್ ಎಂಬ ಹೆಸರಿತ್ತು. 1323ರಲ್ಲಿ ಈತ ತನ್ನ ಸಂಬಂಧಿಯೂ ಫ್ರಾನ್ಸಿನ ದೊರೆಯೂ ಆಗಿದ್ದ 4ನೆಯ ಚಾಲ್ರ್ಸನ ಆಸ್ಥಾನಕ್ಕೆ ಹೋಗಿದ್ದಾಗ ಅಲ್ಲಿ ಇವನಿಗೆ ಚಾಲ್ರ್ಸ್ ಎಂದು ನಾಮಕರಣವಾಯಿತು. ಫ್ರಾನ್ಸಿನ 6ನೆಯ ಫಿಲಿಪನ ಸೋದರಿಯನ್ನು ಈತ 1324ರಲ್ಲಿ ವರಿಸಿದ. 1333ರಲ್ಲಿ ಮೊರೇವಿಯದ ಮಾಗ್ರ್ರೇವ್‍ಗೂ 1346ರಲ್ಲಿ ಬೊಹೀಮಿಯಕ್ಕೂ ರಾಜನಾದ. ಅದೇ ವರ್ಷ ರೆನ್ಸ್‍ನಲ್ಲಿ ಇವನನ್ನು ಜರ್ಮನಿಯ ರಾಜನೆಂದು ಘೋಷಿಸಲಾಯಿತು. ಸಾಮ್ರಾಟನೆಂದು ವಿಧ್ಯುಕ್ತವಾಗಿ ಇವನ ಕಿರೀಟಧಾರಣೆಯಾದ್ದು 1355ರಲ್ಲಿ. ಪವಿತ್ರ ರೋಮನ್ ಸಾಮ್ರಾಜ್ಯದ ಚಕ್ರವರ್ತಿಯ ಆಯ್ಕೆಯನ್ನು ನಿಬಂಧಿಸುವ ಏಳು ಜನ ಆಯ್ಕೆದಾರರನ್ನು ಗೊತ್ತು ಪಡಿಸುವ ಗೋಲ್ಡನ್ ಬುಲ್ ಎಂಬ ಸ್ವರ್ಣಮುದ್ರಾಂಕಿತ ಆಜ್ಞೆಯನ್ನು ಹೊರಡಿಸಿದ್ದು ಇವನ ಐತಿಹಾಸಿಕವಾದ ಕೃತಿ (1356). ತನ್ನ ಬೊಹೀಮಿಯ ರಾಜ್ಯಕ್ಕಾಗಿ ಅಪ್ಪರ್ ಪ್ಯೋಟಿನೇಟಿನ ಕೆಲವು ಭಾಗಗಳನ್ನು 1355ರಲ್ಲಿ ಈತ ಖರೀದಿ ಮಾಡಿದ. ವಿಟ್ಟೆಲ್ಸ್ ಬಾಕ್ ಮತ್ತು ಹ್ಯಾಪ್ಸ್‍ಬರ್ಗ್ ಮನೆತನಗಳ ಜೊತೆಗೆ ಮಾಡಿಕೊಂಡ ಉತ್ತರಾಧಿಕಾರ ಒಪ್ಪಂದದಿಂದ ಈತನ ಮಗ ವೆನ್ಸೆಸ್ಲಸ್ ಬ್ರಾಂಡೆನ್‍ಬರ್ಗಿಗೆ ಪಟ್ಟಾಧಿಕಾರಿಯಾಗುವ ಅವಕಾಶ ದೊರಕಿತು (1373). ಚಾಲ್ರ್ಸನ ಮೂರನೆಯ ಮದುವೆಯಿಂದಾಗಿ ಸೈಲೀಷಿಯ ಪ್ರದೇಶ ಬೊಹೀಮಿಯಕ್ಕೆ ಸೇರಿತು. ಈತ 1377ರಲ್ಲಿ ತನ್ನ ಅನುವಂಶಿಕ ರಾಜ್ಯವನ್ನು ವಿಭಜಿಸಿ ಹಿರಿಯ ಮಗ ವೆನ್ಸೆಸ್ಲಸ್‍ಗೆ ಬೊಹೀಮಿಯ, ಸೈಲೀಷಿಯ, ಲಕ್ಸೆಂಬರ್ಗ್‍ಗಳನ್ನು ಕೊಟ್ಟ. ಕಿರಿಯ ಮಗ ಹೆನ್ರಿಗೆ ಗಾರ್ಲಿಜ್‍ನ ಡಚಿ ದೊರೆಯಿತು. ಮೊರೇವಿಯವನ್ನು ತನ್ನ ಸೋದರನ ಮಕ್ಕಳಿಗೆ ಒಪ್ಪಿಸಿದ. ಇವನ ಸಾಮ್ರಾಜ್ಯಕ್ಕೆ ಪ್ರಾಗ್ ರಾಜಧಾನಿಯಾಗಿತ್ತು. ಅಲ್ಲಿ ಈತ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಿದನಲ್ಲದೆ ಅನೇಕ ಮತೀಯ ಕಟ್ಟಡಗಳನ್ನೂ ಕಟ್ಟಿಸಿದ. ಈತ ಸಾಹಿತಿಗಳಿಗೆ ಆಶ್ರಯದಾತನಾಗಿದ್ದ.

ಚಾಲ್ರ್ಸ್ V  : ಪವಿತ್ರ ರೋಮನ್ ಸಾಮ್ರಾಜ್ಯದ ಸಮ್ರಾಟ (1519-56) ಹಾಗೂ ಸ್ಪೇನಿನ 1ನೆಯ ಚಾಲ್ರ್ಸ್ ದೊರೆ (1516-56). ಇಂಗ್ಲೆಂಡಿನ 8ನೆಯ ಹೆನ್ರಿ, ಫ್ರಾನ್ಸಿನ 1ನೆಯ ಫ್ರಾನ್ಸಿಸ್, ಪೋಪ್ 10ನೆಯ ಲಿಯೊ ಹಾಗೂ ತುರ್ಕಿಯ ಸುಲೇಮಾನ್ ಮುಂತಾದ ಘನವಂತರ ಸಮಕಾಲೀನನಾಗಿದ್ದು ತನ್ನ ಘನತೆ ಮೆರೆದ. ಆಸ್ಟ್ರಿಯ ಹಾಗೂ ಪವಿತ್ರ ರೋಮನ್ ಸಾಮ್ರಾಜ್ಯದ ಚಕ್ರವರ್ತಿಯೂ ಹ್ಯಾಪ್ಸ್‍ಬರ್ಗ್ ಮನೆತನದ 1ನೆಯ ಮ್ಯಾಕ್ಸಿಮಿಲಿಯನನ ಮಗನೂ ಆಗಿದ್ದ. ಆಗ್ಸ್‍ಬರ್ಗಿನ ದೊರೆ ಫಿಲಿಪ್ ಈತನ ತಂದೆ. ಆರಗಾನಿನ ದೊರೆ ಫರ್ಡಿನೆಂಡನ ಮತ್ತು ಕ್ಯಾಲಸ್ವಿಲಿನ ರಾಣಿ ಇಸಬೆಲ್ಲಳ ಹಿರಿಯ ಮಗಳಾದ ಜೋನ್ ಇವನ ತಾಯಿ. 1500ರಲ್ಲಿ ಹುಟ್ಟಿದ ಈತ ಫಿಲಿಪ್ಪನ ರಾಜ್ಯಗಳಾದ ಬರ್ಗಂಡಿ ಮತ್ತು ನೆದರ್‍ಲೆಂಡ್ಸ್. ಜೋನಳ ರಾಜ್ಯವಾದ ಆರಗಾನ್‍ಗೂ ಕ್ಯಾಸ್ವಿಲ್‍ಗೂ ಅವುಗಳ ಆಶ್ರಿತ ಪ್ರದೇಶಗಳಿಗೂ ಸಹಜವಾಗಿ ಉತ್ತರಾಧಿಕಾರಿಯಾಗುವವನಿದ್ದ. 1506ರಿಂದಲೇ ಬಾಲಕ ಚಾಲ್ರ್ಸನಿಗೆ ರಾಜಮುಕುಟಗಳ ಸರಮಾಲೆಯೇ ಬಂತು. 1506ರಲ್ಲಿ ಚಾಲ್ರ್ಸನ ತಂದೆ ತೀರಿಕೊಂಡಾಗ ಈತ ಬರ್ಗಂಡಿ ಹಾಗೂ ಕ್ಯಾಸ್ವಿಲ್‍ಗಳ ದೊರೆಯಾದ. 1516ರಲ್ಲಿ ಈತನ ಅಜ್ಜ (ತಾಯಿಯ ತಂದೆ) ಫರ್ಡಿನೆಂಡ್ ತೀರಿಕೊಂಡಾಗ ಇವನು ಆರಗಾನ್ ಸಹಿತ ಇಡೀ ಸ್ಪೇನಿನ ಸ್ವಾಮಿಯಾದ. ರೋಮನ್ ಸಾಮ್ರಾಟ ಮ್ಯಾಕ್ಸಿಮಿಲಿಯನ್ 1519ರಲ್ಲಿ ತೀರಿಕೊಂಡಾಗ ಹ್ಯಾಪ್ಸ್‍ಬರ್ಗ್ ಮನೆತನದ ಅನುವಂಶಿಕ ಪ್ರದೇಶಗಳು ಈತನಿಗೆ ಬಂದುವು. ಇದರ ಜೊತೆಗೆ ರೋಮ್‍ನ ಸಾಮ್ರಾಜ್ಯದ ಪಟ್ಟವನ್ನು ಇವನು ಬಯಸಿದ. ಇಂಗ್ಲೆಂಡಿನ 8ನೆಯ ಹೆನ್ರಿಯೂ ಫ್ರಾನ್ಸಿನ 1ನೆಯ ಫ್ರಾನ್ಸಿಸನೂ ಆ ಪಟ್ಟಕ್ಕಾಗಿ ಇವನೊಂದಿಗೆ ಸ್ಪರ್ಧಿಸಿದರೂ ಅನೇಕ ಶತಮಾನಗಳಿಂದ ಹ್ಯಾಪ್ಸ್‍ಬರ್ಗರೇ ಇದಕ್ಕೆ ಆಯ್ಕೆಯಾಗುತ್ತಿದ್ದರಿಂದಲೂ ಜರ್ಮನಿಯ ಫಗ್ಗರ್ ಎಂಬ ಶ್ರೀಮಂತ ವ್ಯಾಪಾರಿ ಮನೆತನ ಆಯ್ಕೆದಾರರಿಗೆ ಲಂಚಕೊಟ್ಟು ಅವರನ್ನು ಒಲಿಸಿಕೊಂಡದ್ದರಿಂದಲೂ ಚಾಲ್ರ್ಸನೇ ರೋಮನ್ ಸಮ್ರಾಟನಾಗಿ 1520ರಲ್ಲಿ ಆಯ್ಕೆಗೊಂಡ. ಯೂರೋಪಿನಲ್ಲೇ ತೀರ ವಿಸ್ತಾರವಾದ ಸಾಮ್ರಾಜ್ಯದ ಅಧಿಪತಿಯಾಗಿ ಮೆರೆದ. ಸಾಮ್ರಾಜ್ಯದ ವಿಸ್ತಾರಕ್ಕೆ ಅನುಗುಣವಾಗಿ ಇವನ ತೊಂದರೆಗಳೂ ಅಗಾಧವಾಗಿದ್ದುವು. ಆಂತರಿಕ ಹಾಗೂ ಬಾಹ್ಯ ತೊಂದರೆಗಳಿಂದ ಅವನು ಆಡಳಿತದಲ್ಲಿ ನೆಮ್ಮದಿ ಕಳೆದುಕೊಂಡಿದ್ದ. ಇವನ ಆಳ್ವಿಕೆಗೆ ಒಳಪಟ್ಟಿದ್ದ ಪ್ರದೇಶಗಳ ಆಡಳಿತ ಪದ್ಧತಿಗಳು ಒಂದೇ ಸಮನಾಗಿರಲಿಲ್ಲ. ಅವುಗಳ ಮೇಲೆ ಸಮಾನವಾದ ಅಧಿಕಾರವೂ ಇವನಿಗಿರಲಿಲ್ಲ. ಒಂದೊಂದು ಪ್ರದೇಶದಲ್ಲಿ ಒಂದೊಂದು ವಿಧದಲ್ಲಿ, ಆಯಾ ಸ್ಥಳಗಳ ನಿಯಮ, ಪರಂಪರೆಗಳಂತೆ, ಚಾಲ್ರ್ಸ್ ಆಳಬೇಕಾಗಿತ್ತು. ನೆದರ್‍ಲೆಂಡಿನ 17 ಪ್ರಾಂತ್ಯಗಳಲ್ಲಿ ಒಂದೊಂದಕ್ಕೂ ಒಂದೊಂದು ಬಗೆಯ ಆಡಳಿತವಿತ್ತು. ಅವುಗಳಲ್ಲಿ ಕೇಂದ್ರಾಡಳಿತ ನಾಮಮಾತ್ರವಾಗಿತ್ತು. ಬರ್ಗಂಡಿಗೆ ಸೇರಿದ ಫ್ರಾನ್ಷ್‍ಕಾಂಟೇ ಕೂಡ ಸ್ವತಂತ್ರ ಆಡಳಿತ ವ್ಯವಸ್ಥೆ ಹೊಂದಿತ್ತು. ಕ್ಯಾಸ್ವಿಲ್‍ಗೆ ಸೇರಿದ್ದ, ಹೊಸದಾಗಿ ಗೆದ್ದಂಥ, ಮುಸ್ಲಿಂ ಜನವಸತಿ ಅಧಿಕವಾಗಿದ್ದ, ಗ್ರನಾಡಾಪ್ರಾಂತ್ಯಕ್ಕೆ ಅದರವೇ ಸಮಸ್ಯೆಗಳಿದ್ದುವು. ಇದಲ್ಲದೆ ಕ್ಯಾಸ್ವಿಲ್‍ಗೆ ಆಫ್ರಿಕದಲ್ಲಿ ಅನೇಕ ಚದುರಿದ ನೆಲಗಳೂ ಅಮೆರಿಕದಲ್ಲಿ ವಸಾಹತುಗಳೂ ಇದ್ದುವು. ಆರಗಾನ್‍ನಲ್ಲೂ ನಾಲ್ಕು ಪ್ರತ್ಯೇಕ ಜಿಲ್ಲೆಗಳಿದ್ದುವು. ಪ್ರತಿಯೊಂದಕ್ಕೂ ಪ್ರತ್ಯೇಕ ಜಿಲ್ಲಾ ಸಮಿತಿಗಳಿದ್ದುವು. ನೇಪಲ್ಸ್, ಸಿಸಿಲಿ, ಸಾರ್ಡೀನಿಯಗಳಲ್ಲೂ ಬೇರೆಬೇರೆ ಆಡಳಿತ ವಿಧಾನಗಳಿದ್ದುವು. ಹ್ಯಾಪ್ಸ್‍ಬರ್ಗ್ ಪ್ರದೇಶಗಳಲ್ಲಿ ಆಸ್ಟ್ರಿಯ, ಸ್ಟಿರಿಯ, ಟಿರೋಲ್ ಮುಂತಾದ ಪ್ರತ್ಯೇಕ ಪ್ರದೇಶಗಳಿದ್ದುವು. 1521ರಲ್ಲಿ ತನ್ನ ಸೋದರ ಫರ್ಡಿನೆಂಡ್‍ಗೆ ಚಾಲ್ರ್ಸ್ ಬಿಟ್ಟು ಕೊಟ್ಟದ್ದು ಈ ಭಾಗವನ್ನೇ. ಒಟ್ಟಿನಲ್ಲಿ ಪವಿತ್ರ ರೋಮನ್ ಸಾಮ್ರಾಜ್ಯ ಅನೇಕ ಸಮಸ್ಯೆಗಳ ಆಗರವಾಗಿತ್ತು. ಅಲ್ಲಿನ ನೊಬೆಲ್‍ಗಳ, ನಗರಗಳ, ಪ್ರತಿನಿಧಿಸಭೆಗಳ ನಡುವೆ ಹಕ್ಕುಗಳಿಗಾಗಿ ಸದಾ ಹೋರಾಟ ನಡೆಯುತ್ತಿತ್ತು. ಇದಲ್ಲದೆ ಜರ್ಮನಿಯಲ್ಲಿ ಲೂಥರ್ ಪ್ರಣೀತವಾದ ಪ್ರಾಟೆಸ್ಟಂಟ್ ಬಂಡಾಯವನ್ನು ಕೂಡ ಈತ ಎದುರಿಸಬೇಕಾಯಿತು. ಸ್ಪೇನಿನಲ್ಲೂ ಇವನ ವಿರುದ್ಧ ಬಂಡಾಯಗಳು ನಡೆದುವು. ಈತ ಮೂಲತಃ ಬರ್ಗಂಡಿಯಲ್ಲಿ ಬೆಳೆದವನು, ಸ್ಪ್ಯಾನಿಷ್ ಅಲ್ಲ-ಎಂದು ಜನರಲ್ಲಿ ಅಸಮಾಧಾನವಾಗಿತ್ತು. ಸ್ಪೇನಿನಲ್ಲಿ ಇವನು ಫ್ಲೆಮಿಕ್ ಅಧಿಕಾರಿಗಳನ್ನು ಉಚ್ಚ ಹುದ್ದೆಗಳಿಗೆ ನೇಮಿಸಿದ್ದೂ ಬಂಡಾಯಕ್ಕೆ ಕಾರಣವಾಯಿತು. ಹೀಗಿದ್ದರೂ ತನ್ನ ವಿಶಾಲ ಸಾಮ್ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆಗಳನ್ನು ಸ್ಥಾಪಿಸಲು, ಸಮಾನವಾದ ಆಡಳಿತ ವ್ಯವಸ್ಥೆ ರೂಪಿಸಲು, ವಿವಿಧ ರಾಜ್ಯಗಳ ಜನರ ಸಮಗ್ರ ಪುರೋಗಮನ ಸಾಧಿಸಲು ಚಾಲ್ರ್ಸ್ ಶಕ್ತಿಮೀರಿ ಶ್ರಮಿಸಿದ. ಹಲವು ಹಿರಿಯ ಯುದ್ಧಗಳನ್ನೂ ಈತ ಮಾಡಬೇಕಾಗಿ ಬಂತು. ಇಟಲಿಯ ಕೆಲವು ಪ್ರದೇಶಗಳ ಸ್ವಾಮ್ಯದ ವಿಚಾರದಲ್ಲಿ ಫ್ರಾನ್ಸ್ ಮತ್ತು ಸ್ಪೇನ್‍ಗಳಲ್ಲಿ ಪರಸ್ವರ ಸ್ಪರ್ಧೆಯಿತ್ತು. ಚಾಲ್ರ್ಸನೂ ಫ್ರಾನ್ಸಿನ 1ನೆಯ ಫ್ರಾನ್ಸಿಸನೂ ಸಮ್ರಾಟ ಪಟ್ಟಕ್ಕಾಗಿ ಸ್ಪರ್ಧಿಸಿದ್ದರಿಂದ ಫ್ರಾನ್ಸ್-ಸ್ಪೇನ್‍ಗಳ ಸ್ಪರ್ಧೆಗೆ ಹೆಚ್ಚಿನ ಮಹತ್ವ ಬಂತು. ನೇಪಲ್ಸ್ ಮೇಲಿನ ತನ್ನ ಹಕ್ಕನ್ನು ಫ್ರಾನ್ಸಿಸ್ ಪುನರುಚ್ಚರಿಸಿ, ಮಿಲಾನ್‍ಗೆ ದಾಳಿಯಿಟ್ಟ. ನೆದರ್ಲೆಂಡನ್ನು ಆಕ್ರಮಿಸಬೇಕೆಂಬುದೂ ಫ್ರಾನ್ಸ್-ಸ್ಪೇನ್ ಗಡಿಯಲ್ಲಿದ್ದ ನವಾರ್ ಪ್ರದೇಶದ ಮೇಲಣ ಹಕ್ಕು ಸ್ಥಾಪಿಸಬೇಕೆಂಬುದೂ ಇವನ ಇಚ್ಛೆಯಾಗಿತ್ತು. 1522ರಲ್ಲಿ ಆರಂಭವಾದ ಯುದ್ಧ 1529ರಲ್ಲಿ ಕಂಬ್ರಾಯ್ ಒಪ್ಪಂದದಿಂದ ಕೊನೆಗೊಂಡಿತು. ಇಂಗ್ಲೆಂಡಿನ ನೆರವಿದ್ದರೂ ಫ್ರಾನ್ಸಿಸ್ ಸೋತು ಇಟಲಿ ಹಾಗೂ ನೆದರ್ಲೆಂಡ್ಸ್ ಮೇಲಿನ ತನ್ನ ಹಕ್ಕನ್ನು ಬಿಟ್ಟುಕೊಟ್ಟ. ಆದರೆ ಒಪ್ಪಂದ ತಾತ್ಪೂರ್ತಿಕವಾದ್ದಾಯಿತು. ಸ್ಕಾಟ್ಲೆಂಡ್, ಡೆನ್ಮಾರ್ಕ್, ಸ್ವೀಡನ್, ಜರ್ಮನಿಯ ಪ್ರಾಟೆಸ್ಟಂಟ್ ತುಂಡು ದೊರೆಗಳು ಮತ್ತು ಆಟೊಮನ್ ತುರ್ಕರ ನೆರವಿನಿಂದ ಫ್ರಾನ್ಸಿಸ್ ಯುದ್ಧವನ್ನು ಮುಂದುವರಿಸಿದ. 1533-35ರಲ್ಲಿ ಮತ್ತು 1542-46ರಲ್ಲಿ ಯುದ್ದ ತೀವ್ರವಾಗಿ ಸಾಗಿತು. ಚಾಲ್ರ್ಸನೂ ಫ್ರಾನ್ಸಿಸನೂ ತೀರಿಕೊಂಡ ಅನಂತರವೂ ಈ ಕಲಹ ಮುಂದುವರಿದು 1559ರಲ್ಲಿ ಕೊನೆಗೊಂಡಿತು. 1521ರಲ್ಲಿ ತುರ್ಕರ ದೊರೆ ಸುಲೇಮಾನನ ಸೇನೆ ಹಂಗರಿಯನ್ನು ಮುತ್ತಿ ಬೆಲ್ಗ್ರೇಡನ್ನು ಗೆದ್ದು, 1529ರಲ್ಲಿ ಆಸ್ಟ್ರಿಯದ ರಾಜಧಾನಿ ವಿಯೆನ್ನವನ್ನೂ ಅಪಾಯಕ್ಕೀಡುಮಾಡಿದ್ದರಿಂದ ಚಾಲ್ರ್ಸನೂ ಫರ್ಡಿನಾಂಡನೂ ತುರ್ಕರನ್ನು ಎದುರಿಸಲಾರದೆ ಅವರ ಜೊತೆ ಒಪ್ಪಂದ ಮಾಡಿಕೊಂಡರು. ಹಂಗರಿಯ ಮೇಲೆ ತುರ್ಕರ ಸ್ವಾಮ್ಯವನ್ನು ಒಪ್ಪಿಕೊಂಡು ವಾರ್ಷಿಕ ಕಪ್ಪವನ್ನು ಕೊಡಲು ಕೂಡ ಚಾಲ್ರ್ಸ್ ಒಪ್ಪಿದ. ಜರ್ಮನಿಯಲ್ಲಿ ಅಂತರ್ಯುದ್ಧ ನಡೆಯುತ್ತಿದ್ದದ್ದರಿಂದ ಚಾಲ್ರ್ಸ್ ತುರ್ಕರನ್ನು ಸಮರ್ಥವಾಗಿ ಎದುರಿಸದಾದ.
ಫ್ರಾನ್ಸಿನ ವಿರುದ್ಧ ನಡೆದ ಯುದ್ಧದ ಸಮಯದಲ್ಲಿ ಚಾಲ್ರ್ಸನ ಸೇನೆ ತನಗೆ ಬಹುದಿನಗಳಿಂದ ಸಂಬಳ ಸಂದಿಲ್ಲದ ಕಾರಣ 1527ರಲ್ಲಿ ರೋಂ ನಗರದಲ್ಲಿ ಸುಲಿಗೆ ಮಾಡಿ, 4.000 ಜನರನ್ನು ಕೊಂದು ಒಂಬತ್ತು ತಿಂಗಳ ಕಾಲ ಅಲ್ಲಿ ಅರಾಜಕತೆ ನೆಲೆಸುವಂತೆ ಮಾಡಿತ್ತು. ಇಂಗ್ಲೆಂಡಿನ 8ನೆಯ ಹೆನ್ರಿ ನಿಷ್ಠ ಕ್ಯಾತೊಲಿಕನಾಗಿದ್ದುದರಿಂದ ಚಾಲ್ರ್ಸ್ ಆ ದೇಶದ ದ್ವೇಷ ಕಟ್ಟಿಕೊಳ್ಳಬೇಕಾಯಿತು. ಹೆನ್ರಿಯ ಪತ್ನಿ ಕ್ಯಾದರಿನಳು ಚಾಲ್ರ್ಸನ ಚಿಕ್ಕಮ್ಮನಾಗಿದ್ದಳು. ಅವಳೊಂದಿಗೆ ವಿವಾಹ ವಿಚ್ಛೇದನೆ ಮಾಡಿಕೊಳ್ಳಲು ಅವನು ಪೋಪನ ಅನುಮತಿ ಕೇಳಿದ. ಸಮ್ರಾಟ ಚಾಲ್ರ್ಸನ ಭಯದಿಂದ ಪೋಪ್ ಅನುಮತಿ ನೀಡಲು ನಿರಾಕರಿಸಿದ. ಇದರಿಂದ ಹೆನ್ರಿ ಮತ್ತು ಚಾಲ್ರ್ಸರ ದ್ವೇಷಕ್ಕೆ ಹೊಸ ರಂಗು ಬಂತು. ಇಂಗ್ಲೆಂಡು ಚಾಲ್ರ್ಸನ ವಿರುದ್ಧ ಫ್ರಾನ್ಸಿನ ಪಕ್ಷ ವಹಿಸಿತು. ಕ್ಯಾದರಿನಳನ್ನು ಹೆನ್ರಿ ತ್ಯಜಿಸಿದ; ಕ್ಯಾತೊಲಿಕ್ ಸಂಪ್ರದಾಯವನ್ನು ಬಿಟ್ಟ. ಸಾಮ್ರಾಟನ ಅಧಿಕಾರದ ಬಗ್ಗೆ ಮತ್ಸರ ತಳೆದಿದ್ದ ಜರ್ಮನಿಯ ದೊರೆಗಳಿಗೆ ಪ್ರಾಟೆಸ್ಟಂಟ್ ಸಂಪ್ರದಾಯದ ಉದಯದಿಂದ ಅನುಕೂಲವಾಯಿತು; ಸಾಮ್ರಾಜ್ಯದ ವಿರುದ್ಧ ಬಂಡೇಳಲು ಸುಸಂಧಿ ಒದಗಿಬಂತು. ಸ್ಯಾಕ್ಸನಿ ಮುಂತಾದ ರಾಜ್ಯಗಳು ಫ್ರಾನ್ಸಿನ ನೆರವಿನಿಂದ ಚಾಲ್ರ್ಸನ ವಿರುದ್ಧ ದೀರ್ಘಕಾಲದ ಯುದ್ಧ ನಡೆಸಿದುವು. ಮೆಟ್ಸ್‍ನಲ್ಲಿ ಚಾಲ್ರ್ಸನ ಸೇನೆ 1552ರಲ್ಲಿ ಭಾರಿ ಸೋಲನ್ನು ಅನುಭವಿಸಿತು. ಕೊನೆಗೆ 1555ರಲ್ಲಿ ಆದ ಆಗ್ಸ್‍ಬರ್ಗ್ ಒಪ್ಪಂದದಂತೆ ಚಾಲ್ರ್ಸ್ ಜರ್ಮನ್ ರಾಜ್ಯಗಳಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಬೇಕಾಯಿತು.
1556ರಲ್ಲಿ ಚಾಲ್ರ್ಸ್ ಸ್ಪೇನ್ ರಾಜ್ಯವನ್ನು ತನ್ನ ಮಗ ಎರಡನೆಯ ಫಿಲಿಪ್ಪನಿಗೂ ರೋಮನ್ ಸಾಮ್ರಾಜ್ಯವನ್ನು ಸೋದರ ಫರ್ಡಿನೆಂಡನಿಗೂ ಒಪ್ಪಿಸಿ ನಿವೃತ್ತನಾದ. 1558ರಲ್ಲಿ ತೀರಿಕೊಂಡ. ಪೋಪನ ಕೈಯಲ್ಲಿ ಕಿರೀಟಧಾರಣೆ ಮಾಡಿಸಿಕೊಂಡ ಕೊನೆಯ ಸಾಮ್ರಾಟನಾದ ಇವನ ಅನಂತರ ಸಾಮ್ರಾಜ್ಯದ ವೈಭವ ಬಹುಮಟ್ಟಿಗೆ ಕುಂದಿತು.
ಚಾಲ್ರ್ಸನ ಆಡಳಿತ ಭವ್ಯವಾದ ಪರಾಜಯವೆಂದು ವರ್ಣಿತವಾಗಿದೆ. ಇವನ ಆಳ್ವಿಕೆಯ ಕಾಲದಲ್ಲಿ ಜಾಗತಿಕ ಮಟ್ಟದಲ್ಲಿ ಐರೋಪ್ಯ ಸಂಸ್ಕøತಿ ತೀವ್ರವಾಗಿ ವಿಸ್ತರಣೆ ಹೊಂದಿತು. ಯೂರೋಪಿನ ಇತಿಹಾಸದಲ್ಲಿ 16ನೆಯ ಶತಮಾನ ಸ್ಪೇನಿನ ಪ್ರಭಾವದ ಕಾಲವೆಂದು ಪ್ರಸಿದ್ಧವಾಗಿದೆ. ಚಾಲ್ರ್ಸನೂ ಅವನ ಮಗ ಫಿಲಿಪ್ಪನೂ ಇದಕ್ಕೆ ಕಾರಣ. ಯೂರೋಪಿನಲ್ಲಿ ಹ್ಯಾಪ್ಸ್‍ಬರ್ಗ್ ಮನೆತನದ ಔನ್ನತ್ಯವನ್ನು ಸ್ಥಾಪಿಸಿದವನು ಇವನೇ. ಆ ಕಾಲದ ಅತ್ಯಂತ ಸಮರ್ಥ ರಾಜಕಾರಣಿಯಾದ ಈತ ಎದುರಿಸಬೇಕಾಗಿ ಬಂದ ಅಸಾಧಾರಣ ಸಮಸ್ಯೆಗಳಿಂದಾಗಿ, ಪರಿಸ್ಥಿತಿಯ ಭಾರಿ ಒತ್ತಡದಿಂದಾಗಿ, ತನ್ನ ಹಿರಿಮೆಯ ನೈಜಚಿತ್ರವನ್ನು ಪ್ರಕಟಪಡಿಸಲಾಗದೆ ಹೋದ ದುರ್ದೈವಿ. ಇವನು ವಿದ್ಯೆ. ಸಂಸ್ಕøತಿಗಳ ಪಕ್ಷಪಾತಿಯಾಗಿದ್ದ. ಶ್ರದ್ಧಾಮತ ಕ್ಯಾತೊಲಿಕ್ ಆಗಿದೆಯೆಂದು ಹೇಳಲೇಬೇಕಾಗಿಲ್ಲ. ಖ್ಯಾತ ವೈದ್ಯವಿಜ್ಞಾನಿ ವಿಸೇಲಿಯಸ್ ಇವನ ಖಾಸಗಿ ಚಿಕಿತ್ಸಕ. ಚಾಲ್ರ್ಸನ ಆಡಳಿತದ ಕಾಲದಲ್ಲಿ ಸ್ಪೇನಿನ ಸಾಂಸ್ಕøತಿಕ ಚಟುವಟಿಕೆಗಳು ಅಸಾಧಾರಣವಾಗಿದ್ದುವು. ಸಾಹಿತ್ಯ, ನಾಟಕ, ವಿಜ್ಞಾನ, ಲಲಿತಕಲೆಗಳಲ್ಲಿ ಬಹಳ ಪ್ರಗತಿಯಾಯಿತು.

ಚಾಲ್ರ್ಸ್ VI : ಪವಿತ್ರ ರೋಮನ್ ಚಕ್ರವರ್ತಿ (1711-40), ಆಸ್ಟ್ರಿಯದ ಸಮ್ರಾಟ. ಆಸ್ಟ್ರಿಯದ ಸಮ್ರಾಟನಾಗಿದ್ದ 2ನೆಯ ಲಿಯೊಪೋಲ್ಡನ ಎರಡನೆಯ ಮಗ. 1685ರಲ್ಲಿ ಜನಿಸಿದ. ಸ್ಪೇನಿನ ದೊರೆ 2ನೆಯ ಚಾಲ್ರ್ಸ್ ತೀರಿಕೊಂಡಾಗ ಈತನ ಪಟ್ಟಾಧಿಕಾರವನ್ನು ಲಿಯೋಪೋಲ್ಡ್ ಮುಂದೊಡ್ಡಿದ. ಇದರಿಂದ ಸ್ಪ್ಯಾನಿಷ್ ಉತ್ತರಾಧಿಕಾರ ಯುದ್ಧ (1701-14) ನಡೆಯಿತು. ಫ್ರಾನ್ಸಿನ 14ನೆಯ ಲೂಯಿ ಈ ಹಕ್ಕನ್ನು ವಿರೋಧಿಸಿ, ತನ್ನ ಮೊಮ್ಮಗ ಫಿಲಿಪ್ಪನ ಹಕ್ಕನ್ನು ಮುಂದಿಟ್ಟ. ಇಂಗ್ಲೆಂಡ್, ಪೋರ್ಚುಗಲ್ ಮುಂತಾದವು ಚಾಲ್ರ್ಸನ ಹಕ್ಕನ್ನು ಬೆಂಬಲಿಸಿದುವು. ಚಾಲ್ರ್ಸ್ 1704ರಲ್ಲಿ ಲಿಸ್ಬನ್‍ಗೆ ಹೋದ. ಆದರೆ ಆಸ್ಟ್ರಿಯದ ಸಿಂಹಾಸನಕ್ಕೆ ಹಕ್ಕುದಾರನಾಗಿದ್ದ ಅಣ್ಣ ಜೋಸೆಫ್ 1711ರಲ್ಲಿ ತೀರಿಕೊಂಡಿದ್ದರಿಂದ ಇವನು ಆಸ್ಟ್ರಿಯಕ್ಕೆ ಮರಳಿ ಅದರ ಸಮ್ರಾಟನಾದನಷ್ಟೇ ಅಲ್ಲ, ರೋಮನ್ ಸಮ್ರಾಟನೂ ಆದ ಆದರೆ ಸ್ಪ್ಯಾನಿಷ್ ಉತ್ತರಾಧಿಕಾರ ಯುದ್ಧ ಮುಂದುವರಿಯಿತು. 1714ರಲ್ಲಿ ಅದು ಕೊನೆಗೊಂಡಾಗ ಫ್ರಾನ್ಸಿನ ಫಿಲಿಪನನ್ನು ಸ್ಪೇನಿನ ದೊರೆಯೆಂದು ಇವನು ಮಾನ್ಯ ಮಾಡಿ. ಸ್ಪೇನಿಗೆ ಸೇರಿದ ನೆದರ್‍ಲೆಂಡ್, ಮಿಲಾನ್, ಸಾರ್ಡೀನಿಯ ಮತ್ತು ನೇಪಲ್ಸನ್ನೂ ಟಸ್ಕನಿಯ ಭಾಗಗಳನ್ನೂ ಪಡೆದ. ಪೂರ್ವದ ದೇಶಗಳೊಂದಿಗೆ ವ್ಯಾಪಾರಕ್ಕಾಗಿ 1722ರಲ್ಲಿ ಇವನು ಒಂದು ಕಂಪನಿಯನ್ನು ಸ್ಥಾಪಿಸಿದ. ಆದರೆ ಇಂಗ್ಲೆಂಡ್, ಹಾಲೆಂಡ್‍ಗಳ ಪ್ರತಿಭಟನೆಯ ಕಾರಣದಿಂದ 1731ರಲ್ಲಿ ಅದನ್ನು ಮುಚ್ಚಬೇಕಾಯಿತು. 1733-35ರ ಪೋಲಿಷ್ ಉತ್ತರಾಧಿಕಾರ ಯುದ್ಧದಲ್ಲಿ ಇವನು ಭಾಗವಹಿಸಿ, ನೇಪಲ್ಸ್ ಸಿಸಿಲಿಗಳನ್ನು ಕಳೆದುಕೊಂಡ. ಚಾಲ್ರ್ಸನಿಗೆ ಮೂರು ಹೆಣ್ಣು ಮಕ್ಕಳಿದ್ದರು. ಇವನ ಅನಂತರ ಹಿರಿಯ ಮಗಳು ಮರಿಯ ತೆರೀಸ ಆಸ್ಟ್ರಿಯದ ಸಿಂಹಾಸನವನ್ನೇರಿದಳು.

ಚಾಲ್ರ್ಸ್ VII : ಚಾಲ್ಸ್ ಆಲ್ಬರ್ಟ್ ಎಂದೂ ಈತನ ಹೆಸರು. ಬವೇರಿಯದ ಆಯ್ಕೆದಾರ (ಇಲೆಕ್ಟರ್) ಆಗಿದ್ದ (1726-45). 1742-45ರಲ್ಲಿ ಪವಿತ್ರ ರೋಮನ್ ಸಮ್ರಾಟನಾಗಿದ್ದ. 1697ರಲ್ಲಿ ಹುಟ್ಟಿದ ಈತ ತಾರುಣ್ಯದಲ್ಲಿ ತುರ್ಕರ ವಿರುದ್ಧ ಐರೋಪ್ಯರು ನಡೆಸಿದ ಯುದ್ಧದಲ್ಲಿ (1717) ಭಾಗವಹಿಸಿದ್ದ. ಆಸ್ಟ್ರಿಯದ ಮರಿಯ ತೆರೀಸಳ ಪತಿಯಾದ ಲಸ್ಕನಿಯ ಫ್ರಾನ್ಸಿಸನ ವಿರುದ್ಧ ಸ್ಪರ್ಧಿಸಿ ಸಮ್ರಾಟ್ ಪದವಿ ಗೆದ್ದ. ಆಸ್ಟ್ರಿಯನ್ ಉತ್ತರಾಧಿಕಾರ ಯುದ್ಧದಲ್ಲಿ (1740-48) ಆಸ್ಟ್ರಿಯನ್ ವಿರೋಧಿಗಳ ಕೈಗೊಂಬೆಯಂತಿದ್ದ. ಈ ಕಾಲದಲ್ಲಿ ಬವೇರಿಯ ಇವನ ಕೈತಪ್ಪಿ ಆಸ್ಟ್ರಿಯದ ವಶವಾದರೂ 1744ರಲ್ಲಿ ಮತ್ತೆ ಇವನಿಗೆ ದೊರೆಯಿತು. ಮರುವರ್ಷ ಈತ ತೀರಿಕೊಂಡ.			(ಎಸ್.ಎನ್.ಕೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ